ಸಾಮಾನ್ಯ ಮಹಿಳೆಯರ ಅಸಾಮಾನ್ಯ ಸಾಧನೆ...
ಟೀಮ್ ವೈ.ಎಸ್.
ಜೀವನದಲ್ಲಿ ಏನನ್ನಾದ್ರೂ ಸಾಧಿಸಬೇಕು ಅಂದ್ರೆ ಪರಿಶ್ರಮ ದೃಢ ಮನಸ್ಸು ಇರಲೇ ಬೇಕು. ವಾಣಿಜ್ಯ ನಗರಿಯ ಈ ಹೆಂಗೆಳೆಯರ ಯಶಸ್ಸಿನ ಪಯಣ ಕೂಡ ಇಂಥದ್ದೇ. ಜೈ ಮಹಾಲಕ್ಷ್ಮಿ ಮಹಿಳಾ ಉತ್ಪಾದಕ ಘಟಕದ ಮೂಲಕ ಸ್ವ ಉದ್ಯಮದಲ್ಲಿ ಸೈ ಎನಿಸಿಕೊಂಡಿದ್ದಾರೆ. ಮಹಿಳಾಮಣಿಗಳೆಲ್ಲ ಜೊತೆಯಾಗಿ ಅಡುಗೆ ತಯಾರಿಕಾ ತಂಡವೊಂದನ್ನು ಕಟ್ಟಿಕೊಂಡಿದ್ದಾರೆ. ವೈಷ್ಣವಿ ಸಾಮಂತ್, ರೇಖಾ ಜಗ್ಪತ್, ಪ್ರಿಯಾಂಕಾ ಬಭಲ್, ಸುಹಾಸಿನಿ ಕವಂಕರ್, ಹಾಗೂ ನಮಿತಾ ಜಥರ್ ಮುಂಬೈನ ಒಂದೇ ಗಲ್ಲಿಯಲ್ಲಿ ವಾಸವಾಗಿದ್ದಾರೆ. ಆದ್ರೆ ಕೇಟರಿಂಗ್ ಶುರು ಮಾಡುವ ಮುನ್ನ ಇವರಿಗೆಲ್ಲ ಪರಸ್ಪರ ಪರಿಚಯವೇ ಇರಲಿಲ್ಲ. ಚುನಾಬತ್ತಿಯಲ್ಲಿ ವಾಸವಾಗಿದ್ದ ಇವರನ್ನೆಲ್ಲ ಒಂದುಗೂಡಿಸಿ, ಹೊಸ ಪ್ರಯತ್ನಕ್ಕೆ ಕೈಹಾಕಲು ಪ್ರೇರೇಪಿಸಿದವರು ಅಲ್ಲಿಗೆ ಆಗಾಗ ಭೇಟಿ ನೀಡ್ತಾ ಇದ್ದ ಸಮಾಜ ಸೇವಕಿ.
ತಲಾ 15 ಮಹಿಳೆಯರ ಒಂದೊಂದು ತಂಡ ಕಟ್ಟಿದ ಸಮಾಜ ಸೇವಕಿ ಪ್ರತಿಯೊಬ್ಬರಿಗೂ ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಖಾತೆ ತೆರೆಯಲು ನೆರವಾದ್ರು. ಅಷ್ಟೇ ಅಲ್ಲ ಪ್ರತಿ ತಿಂಗಳು ಎಲ್ಲರೂ ತಲಾ 50 ರೂಪಾಯಿಯನ್ನು ಜಮಾ ಮಾಡುವಂತೆ ಸಲಹೆ ಕೊಟ್ರು. 6 ತಿಂಗಳು ಕಳೆಯುವಷ್ಟರಲ್ಲಿ ಬಹುತೇಕ ಮಹಿಳೆಯರು ತಂಡವನ್ನು ಬಿಟ್ಟು ಹೊರಟೇ ಹೋದ್ರು. ಬೆರಳೆಣಿಕೆಯಷ್ಟು ಮಂದಿ ಮಾತ್ರ ಉಳಿದುಕೊಂಡಿದ್ರು. ಅವರೆಲ್ಲ ಪ್ರತಿಬಾರಿ ಭೇಟಿಯಾದಾಗಲೂ ತಮಗಿರುವ ಸಮಸ್ಯೆಗಳು, ಅದಕ್ಕಿರುವ ಪರಿಹಾರವೇನು ಎಂಬುದರ ಬಗೆಗೆಲ್ಲ ಚರ್ಚಿಸ್ತಾ ಇದ್ರು. ಅವರು ಕೂಡ ಪ್ರತಿ ತಿಂಗಳು 50 ರೂಪಾಯಿಯಂತೆ ಬ್ಯಾಂಕ್ನಲ್ಲಿ ಜಮಾ ಮಾಡ್ತಾ ಇದ್ರು. ಸಾಮಾಜಿಕ ಕಾರ್ಯಕರ್ತೆಯ ನೆರವಿನಿಂದ 2006ರಲ್ಲಿ ಜೈ ಮಹಾಲಕ್ಷ್ಮಿ ಮಹಿಳಾ ಉತ್ಪಾದಕ ಘಟಕ ಜನ್ಮ ತಳೆದಿತ್ತು.
ಆರಂಭದಲ್ಲಿ ಅವರು ತಮ್ಮ ಏರಿಯಾಗಳಲ್ಲೇ ಸಣ್ಣ ಪುಟ್ಟ ಈವೆಂಟ್ಗಳನ್ನು ಆಯೋಜಿಸುತ್ತಿದ್ರು. ಪಡಿತರ ಚೀಟಿಗೆ ಅರ್ಜಿ ಹಾಕೋದು ಹೇಗೆ..? ಕಾನೂನಿನಲ್ಲಿ ಮಹಿಳೆಯರಿಗೆ ಯಾವೆಲ್ಲಾ ಹಕ್ಕುಗಳಿವೆ? ತಾರುಣ್ಯಕ್ಕೆ ಕಾಲಿಡುವ ಸಂದರ್ಭದಲ್ಲಿ ಯುವತಿಯರಿಗೆ ಎದುರಾಗುವ ಸಮಸ್ಯೆಗಳು ಹಾಗೂ ಅದನ್ನು ಎದುರಿಸುವ ಬಗೆ ಹೇಗೆ ಅನ್ನೋದ್ರ ಬಗೆಗೆಲ್ಲಾ ಸುತ್ತಮುತ್ತಲ ಹೆಂಗೆಳೆಯರಿಗೆ ಅರಿವು ಮೂಡಿಸುತ್ತಿದ್ರು. ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ನ ಚೀಫ್ ಡೆವಲಪ್ಮೆಂಟ್ ಆಫೀಸರ್ ಆಗಿದ್ದ ಶುಭಾ ಬೆನುರ್ವರ್ ಮಹಿಳೆಯರ ಪ್ರಯತ್ನಕ್ಕೆ ಸಾಥ್ ಕೊಟ್ರು. ನಾಕಾಗಳಲ್ಲಿ ತಿನಿಸುಗಳನ್ನು ಮಾರಾಟ ಮಾಡುವಂತೆ ಸಲಹೆ ನೀಡಿದ್ರು. ಮುಂಬೈನಲ್ಲಿ ಕಾರ್ಮಿಕರೆಲ್ಲ ಸಾಮಾನ್ಯವಾಗಿ ನಾಕಾಗಳಲ್ಲಿ ಸೇರ್ತಾರೆ. ಪ್ರತಿದಿನ ಬೆಳಗ್ಗೆ ಕೆಲಸ ಅರಸಿಕೊಂಡು ನಾಕಾಗಳಲ್ಲಿ ಜಮಾಯಿಸ್ತಾರೆ. ಹಾಗಾಗಿ ಅಲ್ಲಿ ಬೆಳಗ್ಗೆ ತಿಂಡಿ ಮಾರಾಟ ಮಾಡಿದ್ರೆ ಲಾಭ ಗಳಿಸಬಹುದು ಅನ್ನೋದು ಶುಭಾ ಅವರ ಸಲಹೆ.
ಕನಸನ್ನೇ ಜೀವಿಸಿದ ಹೆಂಗೆಳೆಯರು..
ನಾಕಾಗಳಲ್ಲಿ ತಿನಿಸು ಮಾರಾಟ ಮಾಡಲು ನಿರ್ಧರಿಸಿದ ಮಹಿಳೆಯರು ಅದಕ್ಕೆ ಬೇಕಾದ ಹಣ ಸಂಗ್ರಹಿಸಿದ್ರು. ಅಗತ್ಯ ವಸ್ತುಗಳನ್ನೆಲ್ಲ ಖರೀದಿಸಿದ್ರು. ಮೊದಲನೇ ದಿನ ಬೆಳಗಿನ ಜಾವ 4 ಗಂಟೆಗೆಲ್ಲಾ ತಿನಿಸುಗಳನ್ನು ತಯಾರಿಸಿಕೊಂಡು ನಾಕಾಗಳಿಗೆ ತೆರಳಿದ್ರು. ಆದ್ರೆ ಮೊದಲ ದಿನ ಕೇವಲ 135 ರೂಪಾಯಿಯ ವ್ಯಾಪಾರವಾಯ್ತು. ಉಳಿದ ಉಪಹಾರವನ್ನೆಲ್ಲ ಅಕ್ಕಪಕ್ಕದ ಮನೆಯವರೊಂದಿಗೆ ಹಂಚಿಕೊಂಡು ತಿನ್ನಬೇಕಾಯ್ತು. ಐವರೂ ಒಟ್ಟಿಗೆ ಒಂದೇ ನಾಕಾದಲ್ಲಿ ಇರುವ ಬದಲು ಬೇರೆ ಬೇರೆ ಕಡೆ ಹೋಗುವಂತೆ ಅತ್ಯಮೂಲ್ಯ ಸಲಹೆಯೊಂದು ಕೇಳಿಬಂತು. ಅದರಂತೆ 2 ತಂಡಗಳಾಗಿ ಶಿಫ್ಟ್ನಲ್ಲಿ ಕೆಲಸ ಮಾಡಲು ಮಹಿಳೆಯರು ನಿರ್ಧರಿಸಿದ್ರು. ನಸುಕಿನ 4 ಗಂಟೆಯಿಂದ ಮಧ್ಯಾಹ್ನ 2 ಹಾಗೂ ಮಧ್ಯಾಹ್ನ 3ರಿಂದ ರಾತ್ರಿ ಒಂಭತ್ತು ಗಂಟೆವರೆಗೆ ಎರಡು ತಂಡಗಳಾಗಿ ಉಪಹಾರ ಮಾರಾಟ ಮಾಡಲು ಶುರು ಮಾಡಿದ್ರು. ಅಂದಿನಿಂದ ಜೈ ಮಹಾಲಾಕ್ಷ್ಮಿ ಸಂಘ ಒಂದೊಂದಾಗಿಯೇ ಯಶಸ್ಸಿನ ಮೆಟ್ಟಿಲನ್ನು ಏರ್ತಾ ಇದೆ. ಗ್ರಾಹಕರ ಬೇಡಿಕೆ ಮೇರೆಗೆ ಚಹಾ ಕೂಡ ಮಾರ್ತಿದ್ದಾರೆ. ಬೆಳಗ್ಗೆ ಅವಲಕ್ಕಿ ಹಾಗೂ ಕೇಸರಿಬಾತ್ ಇದ್ರೆ ಮಧ್ಯಾಹ್ನ ಚಹಾ ಸವಿಯಬಹುದು. ಇದರಿಂದ ದಿನಕ್ಕೆ 2000-3000 ರೂಪಾಯಿ ಸಂಪಾದಿಸುತ್ತಿದ್ದಾರೆ. ಹಬ್ಬದ ಸಮಯಗಳಲ್ಲಿ ಸಿಹಿ ತಿನಿಸುಗಳ ಆರ್ಡರ್ ಕೂಡ ಸಿಗುತ್ತಿದೆ.
ಈ ಪಯಣದಲ್ಲಿ ಸಂಘಕ್ಕೆ ಎದುರಾದ ವಿಘ್ನಗಳು ಒಂದೆರಡಲ್ಲ. ಇವರ ಅಂಗಡಿ ಎದುರೇ ಟೀ ಶಾಪ್ ಇಟ್ಟಿದ್ದ ರಾಜಸ್ತಾನಿಯೊಬ್ಬ ಗ್ರಾಹಕರು ಕೈತಪ್ಪಿ ಹೋಗ್ತಾರೆ ಅನ್ನೋ ಕಾರಣಕ್ಕೆ ಮಹಿಳೆಯರ ಮೇಲೆ ದೌರ್ಜನ್ಯ ಎಸಗಲು ಯತ್ನಿಸ್ತಿದ್ದ. ಆದ್ರೆ ಅದನ್ನೆಲ್ಲ ಧೈರ್ಯವಾಗಿ ಎದುರಿಸಿದ ಸಾಹಸಿ ಮಹಿಳೆಯರು, ಅಂಗಡಿಯನ್ನೇ ಶಿಫ್ಟ್ ಮಾಡಲು ಮುಂದಾದ್ರು. ಆಗ 5000 ಬಾಡಿಗೆ ಹಾಗೂ 30000 ಅಡ್ವಾನ್ಸ್ ಕೊಡಲು ಇವರ ಬಳಿ ಹಣವಿರಲಿಲ್ಲ. ಆಗ ತಮ್ಮ ಮಂಗಳಸೂತ್ರವನ್ನೇ ಅಡವಿಟ್ಟು ಮಹಿಳೆಯರು ಹಣ ಹೊಂದಿಸಿದ್ರು. ಈಗ ತಮ್ಮದೇ ಸ್ವಂತ ರೆಸ್ಟೋರೆಂಟ್ ಒಂದನ್ನು ತೆರೆಯುವ ಆಲೋಚನೆಯಲ್ಲಿದ್ದಾರೆ.
ಯಶಸ್ಸಿನ ಗುಟ್ಟು ..
ಜೈ ಮಹಾಲಕ್ಷ್ಮಿ ಮಹಿಳಾ ಉತ್ಪಾದಕ ಘಟಕದ ಯಶಸ್ವಿ ಪಯಣಕ್ಕೆ ಕಾರಣ ಅವರ ವೃತ್ತಿಪರತೆ. ಭಿನ್ನಾಭಿಪ್ರಾಯ ಮೂಡಿದಾಗಲೆಲ್ಲ ಗ್ರಾಹಕರೆದು ಕಚ್ಚಾಡದೇ ಪ್ರತ್ಯೇಕವಾಗಿ ಚರ್ಚಿಸಿ ಬಗೆಹರಿಸಿಕೊಳ್ಳುತ್ತಿದ್ರು. ಇವರ ಕಾರ್ಯತತ್ಪರತೆ ಇಷ್ಟಕ್ಕೇ ಸೀಮಿತವಾಗಿಲ್ಲ. ಕೇಕ್, ಚಾಕೊಲೇಟ್, ಮೇಣದ ಬತ್ತಿ, ಬ್ಯಾಗ್ ಹಾಗೂ ಆಭರಣ ತಯಾರಿಕೆ ಬಗ್ಗೆಯೂ ಇವರು ತರಬೇತಿ ಪಡೆದಿದ್ದಾರೆ. ಸರ್ಕಾರ ಇವರಿಗೆ ಈ ಅವಕಾಶ ಕಲ್ಪಿಸಿಕೊಟ್ಟಿದೆ. ಕೇಟರಿಂಗ್ ಉದ್ಯಮದಲ್ಲಿ ಯಶಸ್ವಿಯಾಗಿರುವ ಈ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ತಮ್ಮ ಮಕ್ಕಳಿಗೆ ಒಳ್ಳೆ ಶಿಕ್ಷಣ ಕೊಡಿಸುವ ಕನಸಿದೆ. ಒಟ್ಟಿನಲ್ಲಿ ಸ್ವಾವಲಂಬಿಯಾಗಿ ತಮ್ಮ ಬದುಕನ್ನು ತಾವೇ ಕಟ್ಟಿಕೊಂಡಿರುವ ಈ ಸಾಹಸಿ ಮಹಿಳೆಯರ ಕನಸು ಆದಷ್ಟು ಬೇಗ ಈಡೇರಲಿ.