Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಕಲಾವಿದನೊಳಗೊಬ್ಬ ಕೃಷಿಕ - ತವರಿನ ರೈರಿಗಾಗಿ ನೀರಾವರಿ ವಿಧಾನ ಆಮದು ಮಾಡಿಕೊಂಡ ನವಾಜುದ್ದೀನ್ ಸಿದ್ದಿಕಿ

ಟೀಮ್​ ವೈ.ಎಸ್​. ಕನ್ನಡ

ಕಲಾವಿದನೊಳಗೊಬ್ಬ ಕೃಷಿಕ - ತವರಿನ ರೈರಿಗಾಗಿ ನೀರಾವರಿ ವಿಧಾನ ಆಮದು ಮಾಡಿಕೊಂಡ ನವಾಜುದ್ದೀನ್ ಸಿದ್ದಿಕಿ

Tuesday June 21, 2016 , 2 min Read

ನವಾಜುದ್ದೀನ್ ಸಿದ್ದಿಕಿ ಒಬ್ಬ ಅದ್ಭುತ ನಟ ಅನ್ನೋದು ಎಲ್ರಿಗೂ ಗೊತ್ತು. ಆದ್ರೆ ಅವರ ಸಾಮಾಜಿಕ ಕಳಕಳಿ ಬಗ್ಗೆ ಗೊತ್ತಿರುವವರು ಅಪರೂಪ. ಈ ವರ್ಷ ಕೇನ್ಸ್ ಫೆಸ್ಟಿವಲ್ ನವಾಜುದ್ದೀನ್ ಸಿದ್ದಿಕಿ ಅವರಿಗೆ ಹೊಸ ಅನುಭವದ ಮೂಟೆಯನ್ನೇ ಕಟ್ಟಿಕೊಟ್ಟಿದೆ. ಕೇನ್ಸ್​ಗೆ ತೆರಳಿದ್ದಾಗ ಅಲ್ಲಿ ಕೆಲ ಫ್ರಾನ್ಸ್ ಪ್ರಜೆಗಳೊಂದಿಗೆ ನವಾಜುದ್ದೀನ್‍ಗೆ ಸ್ನೇಹ ಚಿಗುರಿತ್ತು. ಸ್ವಂತ ಹೊಲದ ಮಾಲೀಕರಾಗಿದ್ದ ಅವರು ನವಾಜುದ್ದೀನ್‍ರನ್ನು ತಮ್ಮೊಂದಿಗೆ ಫ್ರಾನ್ಸ್​ಗೆ ಕರೆದೊಯ್ದಿದ್ದರು. ಕೃಷಿ ಬಾಲಿವುಡ್‍ನ ಖ್ಯಾತ ಕಲಾವಿದ ನವಾಜುದ್ದೀನ್ ಸಿದ್ದಿಕಿ ಅವರಿಗೇನೂ ಹೊಸದಲ್ಲ. ಯಾಕಂದ್ರೆ ಪದವಿ ಪೂರೈಸುವ ವರೆಗೂ ನವಾಜುದ್ದೀನ್ ತಮ್ಮ ತವರು ಬುಧಾನಾದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ತಾ ಇದ್ರು. ಇದೀಗ ಫ್ರಾನ್ಸ್​​ನಲ್ಲೂ ಅವರು ಎಲ್ಲರನ್ನೂ ಚಕಿತಗೊಳಿಸುವಂತಹ ಅದ್ಭುತ ಸಂಶೋಧನೆಯೊಂದನ್ನು ಮಾಡಿದ್ದಾರೆ.

image


"ಫ್ರಾನ್ಸ್​ನಲ್ಲಿ ಅತ್ಯಂತ ಮಿತವ್ಯಯಕಾರಿಯಾಗಿ ಬೆಳೆ ಬೆಳೆಯುತ್ತಾರೆ. ``ಕೇಂದ್ರ ಮುಖ್ಯ ನೀರಾವರಿ'' ಎಂಬ ವಿಧಾನವನ್ನು ಬಳಸಿಕೊಂಡು ನೀರನ್ನು ಸಮರ್ಥವಾಗಿ ಉಪಯೋಗಿಸಲಾಗುತ್ತಿದೆ'' ಎನ್ನುತ್ತಾರೆ ನವಾಜುದ್ದೀನ್ ಸಿದ್ದಿಕಿ. ಇದನ್ನೆಲ್ಲ ನೋಡಿಕೊಂಡು ಅವರೇನು ಸುಮ್ಮನಾಗಿಲ್ಲ, ಈ ವಿಧಾನವನ್ನು ತಮ್ಮ ಗ್ರಾಮದಲ್ಲಿ ಅಳವಡಿಸುತ್ತಿದ್ದಾರೆ. ಫ್ರಾನ್ಸ್​ನಲ್ಲೇ ಅದರ ಮಾದರಿ ರಚಿಸಿ ತಮ್ಮೂರಿಗೆ ತರಿಸಿಕೊಂಡಿದ್ದಾರೆ. ಈ ನವೀನ ನೀರಾವರಿ ವಿಧಾನದಲ್ಲಿ ಚಕ್ರಗಳನ್ನೊಳಗೊಂಡ ಟ್ರಾನ್ಸ್​ಫಾರ್ಮರ್ ಅಳವಡಿಸಲಾಗಿದೆ. ಒಂದೆರಡು ಅಡಿ ಅಂತರದಲ್ಲಿ ತಿರುಗುವ ನಳಿಕೆಗಳುಳ್ಳ ಎತ್ತರಿಸಿದ ಪೈಪ್‍ಗಳನ್ನು ಅಳವಡಿಸಲಾಗಿದೆ. ``ಪ್ರತಿ ಪೈಪ್‍ನಿಂದ ಸುಮಾರು ಒಂದು ಎಕರೆ ಪ್ರದೇಶಕ್ಕೆ ನೀರುಣಿಸಬಹುದು. ``ಸಾಂಪ್ರದಾಯಿಕ ನೀರಾವರಿಯಲ್ಲಿ ನಾವು ಬಳಸುವ ನೀರಿನಲ್ಲಿ ಅರ್ಧದಷ್ಟನ್ನು ಉಪಯೋಗಿಸಿಕೊಂಡು ಈ ವಿಧಾನದ ಮೂಲಕ ಒಂದು ಎಕರೆ ಪ್ರದೇಶಕ್ಕೆ ಸಂಪೂರ್ಣ ನೀರುಣಿಸಬಹುದು'' ಎನ್ನುತ್ತಾರೆ ನವಾಜುದ್ದೀನ್ ಸಿದ್ದಿಕಿ. ಉತ್ತರ ಪ್ರದೇಶದಲ್ಲಿ ದಿನೇ ದಿನೇ ನೀರಿನ ಮಟ್ಟ ಕುಸಿಯುತ್ತಿರುವುದರಿಂದ ಈ ನೀರಾವರಿ ವಿಧಾನವನ್ನು ಅಳವಡಿಸಿಕೊಂಡಲ್ಲಿ ರೈತರು ನಿರಾಳರಾಗಬಹುದು ಅನ್ನೋದು ಅವರ ಅಭಿಪ್ರಾಯ.

"ಉತ್ತರ ಪ್ರದೇಶ ಸರ್ಕಾರ ನೇಮಿಸಿದ್ದ ಸಮಿತಿ ಬುಧಾನಾವನ್ನು ಕಪ್ಪು ವಲಯವೆಂದು ಘೋಷಿಸಿದೆ, ಕಾರಣ ಈ ಪ್ರದೇಶದಲ್ಲಿ ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿದಿರುವುದು. ನಾನು ಕೃಷಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸುಮಾರು 80 ಅಡಿ ಆಳದಲ್ಲಿ ನೀರು ಸಿಗುತ್ತಿತ್ತು. ಆದ್ರೆ ನಾಲ್ಕು ವರ್ಷಗಳಿಂದೀಚೆಗೆ 110-120 ಅಡಿ ಬೋರ್‍ವೆಲ್ ಕೊರೆದರೂ ನೀರು ಸಿಗುತ್ತಿಲ್ಲ. ಈಗ ಬುಧಾನಾದಲ್ಲಿ ಜೀವಜಲ ಹುಡುಕಬೇಕೆಂದರೆ 220 ಅಡಿ ಆಳಕ್ಕೆ ಬಾವಿ ಕೊರೆಯಬೇಕಾಗಿ ಬಂದಿದೆ. ನಾವು ಈ ಬಗ್ಗೆ ಗಮನಹರಿಸದೇ ಇದ್ರೆ, ನೀರಿನ ಮಿತವ್ಯಯದ ಮಹತ್ವ ಅರಿತು ಹೊಸ ವಿಧಾನ ಅಳವಡಿಸಿಕೊಳ್ಳಲದೇ ಹೋದಲ್ಲಿ ಇನ್ನು ಐದು ವರ್ಷಗಳ ಬಳಿಕ 400 ಅಡಿ ಆಳದಲ್ಲಿ ನೀರಿನ ಸೆಲೆ ದೊರೆಯುವುದು ಕಷ್ಟ'' 
- ನವಾಜುದ್ದೀನ್ ಸಿದ್ದಿಕಿ 

ನವಾಜುದ್ದೀನ್ ಸಿದ್ದಿಕಿ ಫ್ರಾನ್ಸ್​ನಿಂದ ತಂದ ವಿನೂತನ ನೀರಾವರಿ ವಿಧಾನ ರೈತರಿಗೆ ಹೊಸದು. ಆದ್ರೆ ನವಾಜುದ್ದೀನ್ ಅವರ ಕಳಕಳಿ ಹಾಗೂ ಕಾಳಜಿಗೆ ಮನಸೋತು, ನೀರಿನ ಮಿತವ್ಯಯದ ಅಗತ್ಯ ಅರಿತು ರೈತರು ಅದನ್ನು ಅಳವಡಿಸಿಕೊಂಡಿದ್ದಾರೆ. ``ಈ ವಿಧಾನವನ್ನು ಅಳವಡಿಸಿಕೊಳ್ಳುವುದರಿಂದ ಜೈವಿಕ ಅನುಕೂಲ ಕೂಡ ಇದೆ. ಸಂಶೋಧಕರ ಪ್ರಕಾರ ಬೆಳೆಗಳಿಗೆ ಮೇಲಿನಿಂದ ನೀರು ಹಾಯಿಸಿದರೆ ಉತ್ತಮ. ಅವು ಆರೋಗ್ಯಕರವಾಗಿ ಬೆಳೆಯುತ್ತವೆ. ಆದ್ರೆ ಈ ಪ್ರಕ್ರಿಯೆಯನ್ನು ವಿವರಿಸುವುದು ನಿಜಕ್ಕೂ ಸವಾಲು'' ಎನ್ನುತ್ತಾರೆ ಅವರು. ``ನಿಮ್ಮ ಹೊಲಕ್ಕೆ ನೀರುಣಿಸಲು ಅತ್ಯಂತ ಉತ್ತಮ ವಿಧಾನ ಯಾವುದು ಅಂತಾ ನಾವೇ ರೈತರನ್ನು ಪ್ರಶ್ನಿಸಬೇಕು. ಸಹಜವಾಗಿ ಎಲ್ಲರೂ ನೈಸರ್ಗಿಕ ಮಳೆ ಎನ್ನುತ್ತಾರೆ. ಈ ವಿಧಾನ ಕೂಡ ಮಳೆಹನಿಗಳಂತೆಯೇ ಬಿದ್ದು ಗಿಡಗಳಿಗೆ ನೀರುಣಿಸುತ್ತದೆ. ಹಾಗಾಗಿ ನಾನೇ ಮಳೆ ಬರಿಸಿದರೆ ಹೇಗಿರುತ್ತೆ ಅಂತಾ ರೈತರನ್ನು ಕೇಳುತ್ತೇನೆ'' ಎನ್ನುತ್ತಾರೆ ನವಾಜುದ್ದೀನ್.

ಈಗಾಗಲೇ ಬಾಲಿವುಡ್‍ನಲ್ಲಿ ಸಾಕಷ್ಟು ಹೆಸರುಗಳಿಸಿರುವ ನವಾಜುದ್ದೀನ್ ಸಿದ್ದಕಿ ಅವರಿಗೆ ಬಿಡುವು ಸಿಗುವುದೇ ಅಪರೂಪ. ಆದ್ರೆ ಸಮಯ ಸಿಕ್ಕಾಗಲೆಲ್ಲ ಅವರು ಕಾಲಕಳೆಯುವುದು ತಮ್ಮ ಹೊಲಗಳಲ್ಲಿ. ಕಬ್ಬು, ಅಕ್ಕಿ ಮತ್ತು ಗೋಧಿ ಬೆಳೆಯುವ ಮೂಲಕ ಮಣ್ಣಿನ ಮಗ ಎನಿಸಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಊರಿನ ರೈತರಿಗಾಗಿಯೇ ಫ್ರಾನ್ಸ್​ನಿಂದ ನೀರಾವರಿ ವ್ಯವಸ್ಥೆಯನ್ನು ಆಮದು ಮಾಡಿಕೊಳ್ಳುವ ಮೂಲಕ ಸರಳತೆ ಮೆರೆದಿದ್ದಾರೆ. 

ಇದನ್ನು ಓದಿ:

1. ರಾಜಧಾನಿಯಲ್ಲೇ ಕತ್ತಲು - ಬೆಂಗಳೂರಿನ 33,000 ಮನೆಗಳಿಗಿಲ್ಲ ವಿದ್ಯುತ್ ಸಂಪರ್ಕ

2. ಕೊಳಗೇರಿ ಮಕ್ಕಳ ಭವಿಷ್ಯ ರೂಪಿಸುತ್ತಿರುವ ಜನಾಗ್ರಹ ಸಂಸ್ಥೆ

3. ಯೋಗದಿಂದ ರೋಗ ನಿರೋಧಕ ಶಕ್ತಿ..!