Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಆಡುವ ವಯಸ್ಸಿನಲ್ಲಿ ಉದ್ಯಮದ ಕನಸು- 13ನೇ ವರ್ಷದಲ್ಲೇ ಸಿಇಒ ಆಗಿ ದಾಖಲೆ ಬರೆದ ಯುವ ಉದ್ಯಮಿ

ಟೀಮ್​ ವೈ.ಎಸ್​. ಕನ್ನಡ

ಆಡುವ ವಯಸ್ಸಿನಲ್ಲಿ ಉದ್ಯಮದ ಕನಸು- 13ನೇ ವರ್ಷದಲ್ಲೇ ಸಿಇಒ ಆಗಿ ದಾಖಲೆ ಬರೆದ ಯುವ ಉದ್ಯಮಿ

Wednesday March 29, 2017 , 4 min Read

ದೇಶದಲ್ಲಿ ಸ್ಟಾರ್ಟ್ ಅಪ್​​ಗಳ ಬಗ್ಗೆ ಯೋಚನೆಗಳು ಹೆಚ್ಚುತ್ತಿವೆ. ಪ್ರತಿಯೊಬ್ಬ ವ್ಯಕ್ತಿಗೂ ಉದ್ಯಮ ನಡೆಸುವ ಆಲೋಚನೆಗಳು ಮತ್ತು ಕನಸುಗಳು ಹುಟ್ಟಿಕೊಳ್ಳುತ್ತಿವೆ. ಶಾಲೆ, ಕಾಲೇಜುಗಳಿಗೆ ಶಿಕ್ಷಣ ಪಡೆಯಲು ತೆರಳುವ ವಿದ್ಯಾರ್ಥಿಗಳಲ್ಲೂ ಸ್ಟಾರ್ಟ್ ಅಪ್ ಬಗ್ಗೆ ಕನಸುಗಳಿರುತ್ತವೆ. ಆರ್ಥಿಕವಾಗಿ ಕೊಂಚ ಸಬಲವಾಗಿರುವ ವಿದ್ಯಾರ್ಥಿಗಳು ಶಾಲೆ ಬಿಟ್ಟು ಉದ್ಯಮ ಆರಂಭಿಸಿದ ಉದಾಹರಣೆಗಳು ನಮ್ಮ ಮುಂದಿದೆ. ಆದ್ರೆ ಅಯಾನ್ ಚಾವ್ಲಾ ಅನ್ನುವ ಹುಡುಗನ ಕಥೆ ಕೊಂಚ ವಿಭಿನ್ನ. ಅಯಾನ್ ಚಾವ್ಲಾ ತನ್ನ 13ನೇ ವರ್ಷದಲ್ಲೇ ಉದ್ಯಮಕ್ಕೆ ಕಾಲಿಟ್ಟ ಹುಡುಗ. ಅಷ್ಟೇ ಅಲ್ಲ ಭಾರತದಲ್ಲಿ ಅತಿ ಚಿಕ್ಕವಯಸ್ಸಿನಲ್ಲೇ ಸಿಇಒ ಸ್ಥಾನಕ್ಕೇರಿದ ದಾಖಲೆ ಬರೆದಿದ್ದಾರೆ. 

ಅಯಾನ್ ತನ್ನ 7ನೇ ವಯಸ್ಸಿನಲ್ಲೇ ಕಂಪ್ಯೂಟರ್ ಪಡೆದುಕೊಳ್ಳುವ ಸೌಭಾಗ್ಯ ಪಡೆದುಕೊಂಡಿದ್ದರು. ಎಲ್ಲಾ ಹುಡುಗರಂತೆ ಅಯಾನ್ ಕೂಡ ಕಂಪ್ಯೂಟರ್​ನಲ್ಲಿ ಸಾಧ್ಯವಿರುವ ಎಲ್ಲಾ ಪ್ರಯೋಗಗಳನ್ನು ಮಾಡಿದ್ದರು. ವಿಡಿಯೋ ಗೇಮ್ ಆಡುವುದರಿಂದ ಹಿಡಿದು, ವಿಡಿಯೋ ಎಡಿಟಿಂಗ್ ಮತ್ತು ಚಲನಚಿತ್ರಗಳ ಎಡಿಟಿಂಗ್​ಗಳ ಬಗ್ಗೆ ಜ್ಞಾನ ಸಂಪಾದಿಸಿಕೊಂಡಿದ್ದರು. ಈ ವೇಳೆಯಲ್ಲಿ ಅಯಾನ್ ತಾಂತ್ರಿಕತೆಯ ಅಭಿವೃದ್ಧಿಯನ್ನು ಕಂಡುಕೊಂಡಿದ್ದರು. ಹೆತ್ತವರು ಮತ್ತು ಸಂಬಂಧಿಕರು ಅಯಾನ್​ಗೆ ಶಿಕ್ಷಣ ಮತ್ತು ಶೈಕ್ಷಣಿಕ ಪದವಿಗಳ ಬಗ್ಗೆ ಸಾಕಷ್ಟು ಕಿವಿಮಾತು ನೀಡಿದ್ದರು. ಆದ್ರೆ ಅಯಾನ್ ಅದನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಬದಲಾಗಿ ತನ್ನ ಶಿಕ್ಷಣವನ್ನು 9ನೇ ತರಗತಿಗೇ ನಿಲ್ಲಿಸಿಬಿಟ್ರು. ಅಯಾನ್ ಬದುಕಿನಲ್ಲಿ ಈ ನಿರ್ಧಾರ ಹೊಸ ತಿರುವು ನೀಡಿತು.

image


ದೆಹಲಿ ಮೂಲದ ಅಯಾನ್ ಹುಟ್ಟಿದ್ದು 1997ರಲ್ಲಿ. ಅಪ್ಪ ಕುಂಜಮ್ ಚಾವ್ಲಾ ಫ್ಯಾಷನ್ ಡಿಸೈನರ್. ಅಯಾನ್ ಹಿರಿಯ ಸಹೋದರಿ ಜೋಲ್ಶಾ ಚಾವ್ಲಾ ಎಂಜಿನಿಯರ್. ಹೀಗಾಗಿ ಅಯಾನ್​ಗೆ ಶಿಕ್ಷಣದ ಬಗ್ಗೆ ಸಲಹೆ ನೀಡಲು ಸಾಕಷ್ಟು ಜನರಿದ್ದರು. ಆದ್ರೆ ಅಯಾನ್ ಮನಸ್ಸು ಮಾತ್ರ ಉದ್ಯಮದ ಕಡೆಗೆ ವಾಲಿತ್ತು.

“ ನನಗೆ 7 ಅಥವಾ 8ನೇ ವಯಸ್ಸಿನಲ್ಲೇ ಕಂಪ್ಯೂಟರ್ ಕೈಗೆ ಸಿಕಿತ್ತು. ಚಿಕ್ಕವಯಸ್ಸಿನಲ್ಲಿ ನನಗೆ ಕಲಿಕೆ ಸುಲಭವಾಗಿತ್ತು. ನಾನು ಕೆಲವೊಂದು ಸಿಂಪಲ್ ಸಾಫ್ಟ್​ವೇರ್​ಗಳ ಮೂಲಕ ಮೂವಿ ಎಡಿಟಿಂಗ್​ಗಳನ್ನು ಕಲಿತುಕೊಂಡೆ. ಒಂದು ದಿನ ನಾನು ವೆಬ್​ಸೈಟ್​ಗಳನ್ನು ಡಿಸೈನ್ ಮಾಡುವುದು, ಸಾಫ್ಟ್​ವೇರ್ ಮತ್ತು ಆ್ಯಪ್​ಗಳ ಅಭಿವೃದ್ಧಿ ಮಾಡುವುದನ್ನು ಕಲಿತುಕೊಂಡ್ರೆ ಉತ್ತಮ ಎಂದು ಅನಿಸಿತು. ನಾನು 13 ವರ್ಷ ವಯಸ್ಸಿನವನಿದ್ದಾಗ ನನಗೆ ಜನರ ನಡುವೆ ಸಂಬಂಧ ಬೆಳಸುವ ಯೋಚನೆ ಬಂದಿತ್ತು. ಅದಕ್ಕೆ ಬೇಕಾದ ಹೋಮ್ ವರ್ಕ್​ಗಳನ್ನು ಮಾಡಿದೆ. 2011ರ ಹೊತ್ತಿಗೆ ನನ್ನ ಯೋಚನೆಗಳಿಗೆ ವಿಭಿನ್ನ ಟಚ್ ಕೊಟ್ಟಿದೆ. ಕಂಪನಿಗಳನ್ನು ಆರಂಭಿಸಿದೆ. ”
- ಅಯಾನ್ ಚಾವ್ಲಾ, ಉದ್ಯಮಿ

ಅಯಾನ್ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸ್ವತಃ ತಾನೇ ತೆಗೆದುಕೊಳ್ಳುತ್ತಿದ್ದರು. ಇನ್ನೊಬ್ಬರ ಸಲಹೆಯಾಗಲಿ ಅಥವಾ ಮಾರ್ಗದರ್ಶನವನ್ನಾಗಲಿ ಪಡೆದುಕೊಳ್ಳುತ್ತಿರಲಿಲ್ಲ. ಅಯಾನ್ ಯಾವಗಲೂ ತನ್ನ ಕೋಣೆಯಲ್ಲಿ ಕಂಪ್ಯೂಟರ್ ಜೊತೆಯಲ್ಲಿ ಹೆಚ್ಚಿನ ಕಾಲಕಳೆಯುತ್ತಿದ್ದರು. ತಾಂತ್ರಿಕ ಅಂಶಗಳನ್ನು ಮತ್ತು ಅಭಿವೃದ್ಧಿ ಬಗ್ಗೆ ಜ್ಞಾನ ಕೊಡುವ ಪುಸ್ತಕಗಳನ್ನು ಓದುತ್ತಿದ್ರು. ಎಲ್ಲದಕ್ಕೂ ಇಂಟರ್ ನೆಟ್​ ಸಹಾಯ ಪಡೆದುಕೊಳ್ಳುತ್ತಿದ್ದರು. ಅಯಾನ್ ಬೆಳವಣಿಗೆಯಲ್ಲಿ ಅವರ ಅಮ್ಮನ ಪಾತ್ರವೂ ಬಹುದೊಡ್ಡದಿತ್ತು.

“ ನನ್ನ ಅಮ್ಮ ನನ್ನ ಕಂಪನಿಯ ಲೀಗಲ್ ಮತ್ತು ಫೈನಾನ್ಶಿಯಲ್ ವಿಚಾರಗಳನ್ನು ನೋಡಿಕೊಳ್ಳುತ್ತಿದ್ದರು. ಆಕೆ ನನ್ನ ಕಂಪನಿಯ ಮುಖ್ಯಸ್ಥೆಯಾಗಿದ್ದರು. ಆಕೆಗೆ ಇನ್​ಫಾರ್ಮೆಷನ್​ ಟೆಕ್ನಾಲಜಿ ವಿಷಯದಲ್ಲಿ ಪರಿಣಿತಿ ಇರಲಿಲ್ಲ. ಅಷ್ಟೇ ಅಲ್ಲ ನನ್ನ ಕೆಲಸದಲ್ಲಿ ತಲೆಹಾಕುತ್ತಿರಲಿಲ್ಲ. ಆಕೆ ಮಹಾತಾಯಿ. ನನ್ನ ಮನೆಯಲ್ಲಿ ಸಾಕಷ್ಟು ಕೆಲಸದಾಳುಗಳಿದ್ದರು ನನ್ನ ವೈಯಕ್ತಿಕ ಮತ್ತು ದೈನಂದಿನ ಬದುಕಿನ ಬಗ್ಗೆ ಹೆಚ್ಚು ಗಮನಕೊಡುತ್ತಿದ್ದಳು. ಕೆಲಸದ ಸಮಯದಲ್ಲಿ ನನಗೆ ಆಕೆಯ ಜೊತೆ ಮಾತನಾಡಲು ಸಮಯ ಸಿಗುತ್ತಿದ್ದಿದ್ದು ಅಪರೂಪವೇ.”
- ಅಯಾನ್ ಚಾವ್ಲಾ, ಉದ್ಯಮಿ

ಅಯಾನ್ 2011ರಲ್ಲಿ ಏಷ್ಯನ್ ಫಾಕ್ಸ್ ಡೆವಲಪ್​ಮೆಂಟ್ಸ್​ ಅನ್ನುವ ಕಂಪನಿಯನ್ನು ಆರಂಭಿಸಿದ್ದರು. ಏಷ್ಯನ್ ಫಾಕ್ಸ್ ಡೆವಲಪ್​ಮೆಂಟ್​ ಐಟಿ, ವೆಬ್, ಮಾರ್ಕೆಟಿಂಗ್ ಪ್ರಾಡಕ್ಟ್​ಗಳನ್ನು ಮತ್ತು ಸೇವೆಯನ್ನು ಒದಗಿಸುತ್ತಿತ್ತು. ಮುಂದಿನ ಎರಡು ವರ್ಷಗಳಲ್ಲಿ ಅಯಾನ್, ಗ್ರೂಪ್ ಫಾರ್ ಬಡ್ಡೀಸ್, ಗ್ಲೋಬಲ್ ವೆಬ್ ಮೌಂಟ್ ಮತ್ತು ಮೈಂಡ್- ಇನ್- ಅಡ್ವಟೈಸಿಂಗ್ ಅನ್ನುವ ಮೂರು ಕಂಪನಿಗಳನ್ನು ಆರಂಭಿಸಿದ್ರು. ಆರಂಭದಲ್ಲಿ ಅಯಾನ್ ಕಂಪನಿಯಗೆ ಅವರ ತಾಯಿ 10,000 ರೂಪಾಯಿಗಳ ಹೂಡಿಕೆ ಮಾಡಿದ್ದು ಬಿಟ್ರೆ ಇಲ್ಲಿ ತನಕ ಬೇರೆ ಹಣವನ್ನು ಅವರ ತಾಯಿ ಕೈಯಿಂದ ಪಡೆದುಕೊಂಡಿಲ್ಲ. ಅಷ್ಟೇ ಅಲ್ಲ ಫಂಡಿಂಗ್ ವಿಷಯಕ್ಕಾಗಿ ಯಾವುದೇ ಹೂಡಿಕೆದಾರರನ್ನು ಅಯಾನ್ ಬೇಟಿಯೂ ಆಗಿಲ್ಲ.

“ ಸಾಕಷ್ಟು ಸಂದರ್ಭಗಳಲ್ಲಿ ನನ್ನ ಗ್ರಾಹಕರು ನನ್ನನ್ನು ಹೆಚ್ಚು ಸಿರೀಯಸ್ ಆಗಿ ತೆಗೆದುಕೊಳ್ಳುತ್ತಿರಲಿಲ್ಲ. ಆದ್ರೆ ನನ್ನ ಪ್ರಾಡಕ್ಟ್​​ಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು. ಮೊದಲ ವರ್ಷದಲ್ಲಿ ನಾನು ಸಾಕಷ್ಟು ಕಷ್ಟಗಳನ್ನು ಆನುಭವಿಸಿದೆ. ನನಗೆ ಅನುಭವ ಕೂಡ ಇರಲಿಲ್ಲ. ಆದ್ರ ದಿನಕಳೆದಂತೆ ನಾನು ನನ್ನ ಸಾಮರ್ಥ್ಯವನ್ನು ನಂಬಿದೆ.”
- ಅಯಾನ್ ಚಾವ್ಲಾ, ಉದ್ಯಮಿ

ಅಯಾನ್ ಯಶಸ್ಸಿನ ಮೆಟ್ಟಿಲು ಹತ್ತಿದ ಮೇಲೂ ಸಮಯವನ್ನು ವ್ಯರ್ಥ ಮಾಡುತ್ತಿಲ್ಲ. ಬದಲಾಗಿ ಇಂಟರ್ ನೆಟ್​ನಲ್ಲಿ ಹೊಸದನ್ನು ಹುಡುಕುತ್ತಿರುತ್ತಾರೆ. ಐಟಿ ಫೀಲ್ಡ್ ಮತ್ತು ಮಾರ್ಕೆಟ್​ಗಳ ಬಗ್ಗೆ ಹೆಚ್ಚು ಕಲಿತುಕೊಳ್ಳುತ್ತಾರೆ. ಆ ಮೂಲಕ ತನ್ನ ಕಂಪನಿಯ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇವತ್ತು ಅಯಾನ್ ಹಲವು ಸೆಮಿನಾರ್, ಕಾನ್ಫರೆನ್ಸ್​ಗಳಲ್ಲಿ ಅತಿಥಿಯಾಗಿ ಭಾಷಣ ಮಾಡುತ್ತಾರೆ. ವಿಶ್ವವಿದ್ಯಾಲಯಗಳಿಂದ ಆಹ್ವಾನಗಳು ಬರುತ್ತವೆ. ಉದ್ಯಮಿಗಳ ಜೊತೆಗಿನ ಸಂವಾದದಲ್ಲಿ ಭಾಗಿಯಾಗುತ್ತಾರೆ. ವಿದೇಶಗಳಲ್ಲೂ ತಮ್ಮ ಅನುಭವಗಳನ್ನು ಹಂಚಿಕೊಂಡು ಮಿಂಚಿದ್ದಾರೆ. ಅಯಾನ್ ಯಾವುದೇ ಪದವಿ ಇಲ್ಲದೆ ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾಗಿರುವುದು ಕೇವಲ ಪರಿಶ್ರಮದಿಂದ ಅನ್ನುವುದನ್ನು ಮರೆಯುವ ಹಾಗಿಲ್ಲ. ಇತ್ತೀಚೆಗೆ ಏಷ್ಯನ್ ಫಾಕ್ಸ್ ಡೆವಲಪ್​ಮೆಂಟ್ಸ್,​ ನಿರ್ದೇಶ ಇಕ್ರಂ ಅಖ್ತರ್​ ಮತ್ತು ನಿರ್ಮಾಪಕ ರಾಜೇಶ್ ಆರ್. ತ್ರಿಪಾಠಿ ಜೊತೆಗೆ ಮುಂದಿನ ಸಿನಿಮಾ "ಇಂಡಿಯಾ ಮೇ ಲಾಹೋರ್" ಚಿತ್ರಕ್ಕೆ ಐಟಿ ಮತ್ತು ಆನ್ ಲೈನ್ ಮಿಡೀಯಾ ಪಾರ್ಟನರ್ ಆಗಿ ಸಹಿ ಮಾಡಿದೆ ಅನ್ನುವುದು ಮತ್ತೊಂದು ಸಾಧನೆ.

ತನ್ನ 13ನೇ ವರ್ಷಕ್ಕೆ ಉದ್ಯಮ ಆರಂಭಿಸಿದ್ದ ಅಯಾನ್ 18ನೇ ವರ್ಷಕ್ಕೆ ಕಾಲಿಡುವ ವೇಳೆಗೆ ವಿಶ್ವದಾದ್ಯಂತ 1 ಲಕ್ಷಕ್ಕೂ ಅಧಿಕ ಗ್ರಾಹಕರನ್ನು ಸಂಪಾದಿಸಿದ್ದರು. ಯುಎಸ್, ಯುಕೆ, ಹಾಂಗ್​ಕಾಂಗ್ ಮತ್ತು ಟರ್ಕಿ ದೇಶಗಳಲ್ಲಿ ಅಯಾನ್ ಕಂಪನಿ ಗ್ರಾಹಕರನ್ನು ಹೊಂದಿದೆ. ಅಯಾನ್ 2 ಬಾರಿ ಯುವ ಉದ್ಯಮಿ ಪ್ರಶಸ್ತಿಯನ್ನು ಪಡೆಯುವುದರ ಜೊತೆಗೆ ಪ್ರಧಾನಿ ಕಚೇರಿಯಿಂದ ವಿಶೇಷ ಪತ್ರವನ್ನು ಕೂಡ ಪಡೆದುಕೊಂಡಿದ್ದಾರೆ.

“ ನಾನು ಅಪರೂಪಕ್ಕೆ ಒಮ್ಮೆ ಪಾರ್ಟಿ ಮಾಡುತ್ತೇನೆ. ಆದ್ರೆ ಸಮಯ ಸಿಕ್ಕಾಗ ಸರಕಾರಿ ಶಾಲೆಗಳಿಗೆ ತೆರಳಿ ಅಲ್ಲಿ ಪಾಠ ಮಾಡುತ್ತೇನೆ. ನಾನು ನನ್ನಲ್ಲಿರುವ ಐಟಿ ಜ್ಞಾನವನ್ನು ಹಂಚಿಕೊಂಡು ಮಕ್ಕಳಲ್ಲಿ ಸ್ಫೂರ್ತಿ ತುಂಬುವ ಪ್ರಯತ್ನ ಮಾಡುತ್ತೇನೆ. ”
- ಅಯಾನ್ ಚಾವ್ಲಾ, ಉದ್ಯಮಿ

ಇವತ್ತು ಉದ್ಯಮಿಯಾಗುವುದು ಸುಲಭದ ಮಾತಲ್ಲ. ಅವುಗಳ ಮಧ್ಯೆ ಅಯಾನ್ ಚಾವ್ಲಾರ ಯಶಸ್ಸಿನ ಕಥೆ ಅಪರೂಪದಲ್ಲಿ ಅಪರೂಪ. ಉದ್ಯಮ ಲೋಕದ ಸ್ಪರ್ಧೆಯಲ್ಲಿ ಅಯಾನ್ ಯಶಸ್ಸು ಸಾಧಿಸಿದ್ದಾರೆ. ಅಷ್ಟೇ ಅಲ್ಲ ದೊಡ್ಡ ಕನಸು ಕಾಣುತ್ತಿರುವ ಉದ್ಯಮಿಗಳಿಗೆ ಅಯಾನ್ ಕಥೆ ಸ್ಫೂರ್ತಿ ಅನ್ನುವುದರಲ್ಲಿ ಎರಡು ಮಾತಿಲ್ಲ.

ಇದನ್ನು ಓದಿ:

1. ನವರಸ ಸಾಧನಗಳ ಪರಿಣಿತ- ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ಕನ್ನಡಿಗ

2. ಹುಬ್ಬಳ್ಳಿಯಿಂದ ದೆಹಲಿ ತನಕ- ಇದು ಬಣ್ಣದ ಕ್ಯಾನ್ವಾಸ್​​ನಲ್ಲಿ ಸಾಧನೆ ಕಥೆ

3. ನಿಮ್ಮ ಸ್ಟಾರ್ಟ್​ಅಪ್​ ಗೆಲುವಿಗೆ ಇವಿಷ್ಟೇ ಮೂಲ ಕಾರಣ..!