Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಇಡೀ ದೇಶದಲ್ಲಿಯೇ ರಾಷ್ಟ್ರಧ್ವಜ ತಯಾರಿಸುವಂತಹ ಏಕೈಕ ಘಟಕ

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದ ಬೆಂಗೇರಿ ಎಂಬಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ(ಕೆಕೆಜಿಎಸ್‌ಎಸ್) ಇಡೀ ದೇಶದಲ್ಲಿಯೇ ಭಾರತೀಯ ಧ್ವಜ ತಯಾರಿಸುವಂತಹ ಏಕೈಕ ಉತ್ಪಾದನಾ ಮತ್ತು ಸರಬರಾಜು ಮಾಡುವ ತಾಣವಾಗಿದೆ.

ಇಡೀ ದೇಶದಲ್ಲಿಯೇ ರಾಷ್ಟ್ರಧ್ವಜ ತಯಾರಿಸುವಂತಹ ಏಕೈಕ ಘಟಕ

Sunday January 26, 2020 , 3 min Read

ಜನವರಿ 26 ಭಾರತ ದೇಶವು ಗಣರಾಜ್ಯವಾದ ದಿನ. ಭಾರತೀಯ ಸಂವಿಧಾನವು ಜಾರಿಗೆ ಬಂದು ಗಣರಾಜ್ಯವಾದದ್ದು ಜನವರಿ‌ 26, 1950ರಂದು. ಇದರ ಪ್ರಯುಕ್ತವಾಗಿ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.


ಎಲ್ಲೆಡೆ ತ್ರಿವರ್ಣ ಧ್ವಜ ಹಾರಾಡುವ ಸಂಭ್ರಮ. ಶಾಲಾ-ಕಾಲೇಜುಗಳಲ್ಲಿ, ಕಾರು, ಬೈಕ್‌ನಂತಹ ವಾಹನಗಳಲ್ಲಿ ಬಾವುಟವು ಹಾರುತ್ತಾ ನಗುವನ್ನು ಬೀರುತ್ತಿರುತ್ತದೆ. ದಿಲ್ಲಿಯ


ಕೆಂಪು ಕೋಟೆಯಿಂದ ಹಿಡಿದು, ಭಾರತದ ಎಲ್ಲಾ ಶಾಲಾ-ಕಾಲೇಜು, ಸರಕಾರಿ ಕಚೇರಿಗಳಲ್ಲಿ ಹಾರಾಡುವಂತಹ ಧ್ವಜಗಳೆಲ್ಲ ತಯಾರಾಗುವುದೇ ಇಲ್ಲಿ. ಹಾಗಾದರೆ ಈ ಧ್ವಜ ಎಲ್ಲಿ ತಯಾರಾಗ್ತವೆ ಅಂತ ಗೊತ್ತಾ? ಇಡೀ ದೇಶದಲ್ಲಿಯೇ ಇದೊಂದೆ ಕಡೆ ಮಾತ್ರ ರಾಷ್ಟ್ರಧ್ವಜವನ್ನು ತಯಾರಿಸಲಾಗುತ್ತದೆ. ಅದು ನಮ್ಮ ಕರ್ನಾಟಕದ ಪ್ರಮುಖ ನಗರದಲ್ಲಿ ಎನ್ನುವುದೇ ನಮಗೆ ಹೆಮ್ಮೆ.


ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದ ಬೆಂಗೇರಿ ಎಂಬಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ(ಕೆಕೆಜಿಎಸ್‌ಎಸ್) ಇಡೀ ದೇಶದಲ್ಲಿಯೇ ಭಾರತೀಯ ಧ್ವಜ ತಯಾರಿಸುವಂತಹ ಏಕೈಕ ಉತ್ಪಾದನಾ ಮತ್ತು ಸರಬರಾಜು ಮಾಡುವ ತಾಣವಾಗಿದೆ. ಇಲ್ಲಿ ಯಾವುದೇ ಧರ್ಮದ ಭೇದ-ಭಾವವಿಲ್ಲದೆ, ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಗುಂಪೊಂದು ಒಗ್ಗೂಡಿ ರಾಷ್ಟ್ರಧ್ವಜ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.


ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಇತಿಹಾಸ

ಕೆಕೆಜಿಎಸ್‌ಎಸ್ ಅನ್ನು ನವೆಂಬರ್ 7,1957ರಂದು ಸ್ಥಾಪಿಸಲಾಯಿತು. ಗಾಂಧೀವಾದಿಗಳ ಗುಂಪೊಂದು ಈ ಪ್ರದೇಶದ ಖಾದಿ ಮತ್ತು ಇತರೆ ಗುಡಿ ಕೈಗಾರಿಕೆಗಳ ಬೆಳವಣಿಗೆಗೆ ಒಕ್ಕೂಟವನ್ನು ರಚಿಸಲಾಯಿತು. ವೆಂಕಟೇಶ್ ಮಾಗಡಿ ಮತ್ತು ಶ್ರೀರಂಗ ಕಾಮತ ಎನ್ನುವವರು ಕ್ರಮವಾಗಿ ಮೊದಲ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿದ್ದರು.


ಕರ್ನಾಟಕದ ಸುಮಾರು 58 ಸಂಸ್ಥೆಗಳನ್ನು ಈ ಸಂಘದ ಆಶ್ರಯದಲ್ಲಿ ತರಲಾಯಿತು ಮತ್ತು ಹುಬ್ಬಳ್ಳಿಯಲ್ಲಿ ಪ್ರಧಾನ ಕಚೇರಿಯಾಗಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿತು. ಇದು 17 ಎಕರೆ ಪ್ರದೇಶದಲ್ಲಿ ಉತ್ಪಾದನಾ ಸೌಲಭ್ಯಗಳ ಜೊತೆಗೆ, ಟೆಕ್ಸಟೈಲ್ ವಿದ್ಯಾರ್ಥಿಗಳಿಗೆ ತರಬೇತಿ ಕಾಲೇಜನ್ನು ಸಹ ಹೊಂದಿದೆ.


ಖಾದಿ ಉತ್ಪಾದನೆಯೂ 1982ರಲ್ಲಿ ಪ್ರಾರಂಭವಾದರೂ ಧ್ವಜ ಉತ್ಪಾದನೆಯು 2004ರಿಂದ ಕಾರ್ಯಚರಣೆಯನ್ನು ನಿರ್ವಹಿಸಲು ಪ್ರಾರಂಭಿಸಿತು.


ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅನುಕೂಲವಾಗುವಂತೆ ಕೆಕೆಜಿಎಸ್‌ಎಸ್‌ನಲ್ಲಿ ಧ್ವಜ ತಯಾರಿಸುವ ಸೌಲಭ್ಯವನ್ನು ಸ್ಥಾಪಿಸಲು ಸಂಸ್ಥಾಪಕರು ಹೋರಾಡಿದ್ದಾರೆ. ಇಂದು 100ಕ್ಕೂ ಹೆಚ್ಚು ನೂಲುವವರು ಮತ್ತು ನೇಕಾರರು ಧ್ವಜವನ್ನು ತಯಾರಿಸುತ್ತಿದ್ದಾರೆ ಎಂದು, ಕೆಕೆಜಿಎಸ್‌ಎಸ್‌ನ ಧ್ವಜ ವಿಭಾಗದ ವ್ಯವಸ್ಥಾಪಕಿ ನಾಗವೇಣಿ ಕಾಲವಾಡ ಹೇಳುತ್ತಾರೆ.


10,500 ರೂ.ಗಳ ಹೂಡಿಕೆಯೊಂದಿಗೆ ಪ್ರಾರಂಭವಾದ ಈ ಸಂಘ ಇಂದು ವರ್ಷಕ್ಕೆ 1 ಕೋಟಿ ರೂ.ಗಳ ಮೌಲ್ಯದ ಧ್ವಜಗಳನ್ನು ತಯಾರಿಸುತ್ತದೆ.


ಧ್ವಜದ ತಯಾರಿಕೆ ಒಂದೇ ಕಡೆ ಏಕೆ?

ಕೆಕೆಜಿಎಸ್‌ಎಸ್‌ ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್(ಬಿಐಎಸ್) ನಿಗದಿಪಡಿಸಿದಂತಹ ಮಾನದಂಡಕ್ಕೆ ಅನುಸಾರವಾಗಿ ಧ್ವಜಗಳನ್ನು ತಯಾರಿಸುವಂತಹ ಏಕೈಕ ಕೇಂದ್ರವಾಗಿದೆ.


ಕೆಕೆಜಿಎಸ್‌ಎಸ್‌ನ ಬಾಗಲಕೋಟೆಯ ನೇಯ್ಗೆ ಘಟಕದಲ್ಲಿ ಜೀನ್ಸ್‌ಗಿಂತ ಹೆಚ್ಚು ಬಲಶಾಲಿಯಾಗಿರುವಂತಹ ಬಟ್ಟೆಯನ್ನು ನೇಯಲಾಗುತ್ತದೆ. ಅದನ್ನು ಮೂರು ಲಾಟ್‌ಗಳಾಗಿ ವಿಂಗಡಿಸಿ, ಪ್ರತಿಯೊಂದು ಲಾಟ್‌ ಭಾರತೀಯ ಧ್ವಜದ ಬಣ್ಣಗಳಿಂದ ಕೂಡಿರುತ್ತದೆ. ನಂತರ ಬಟ್ಟೆಯನ್ನು ಗಾತ್ರಕ್ಕೆ ತಕ್ಕಂತೆ ಕತ್ತರಿಸಿ ನೀಲಿ ಅಶೋಕ ಚಕ್ರವನ್ನು ಬಿಳಿ ಬಟ್ಟೆಯ ಮೇಲೆ ಮುದ್ರಿಸಲಾಗುತ್ತದೆ. ನಂತರ ಮೂರು ತುಣುಕುಗಳನ್ನು ಒಟ್ಟಿಗೆ ಹೊಲಿದು ಭಾರತೀಯ ಧ್ವಜವನ್ನು ತಯಾರಿಸಲಾಗುತ್ತದೆ.


ಕೆಕೆಜಿಎಸ್‌ಎಸ್‌ನ ಈ ಘಟಕವು ಹೊಲಿಯುವಾಗ ‌ನಿಖರತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಸುಮಾರು 60 ಹೊಲಿಗೆ ಯಂತ್ರಗಳನ್ನು ಹೊಂದಿದೆ. ಪ್ರತಿಯೊಂದು ಧ್ವಜವು ನಿರ್ಣಾಯಕ ಮಾನದಂಡಕ್ಕೆ ಅನುಗುಣವಾಗಿರಬೇಕು.


ಅದನ್ನು ಬಳಸುವ ಮೊದಲು ಬಟ್ಟೆಯು 18 ಬಾರಿ ಸಮಯದ ಗುಣಮಟ್ಟದ ಪರಿಶೀಲನೆಗೆ ಒಳಗಾಗುತ್ತದೆ. ಧ್ವಜದ ಅಗಲ ಮತ್ತು ಉದ್ದವು 2.3 ಅನುಪಾತದಲ್ಲಿರಬೇಕು‌ ಮತ್ತು ಅಶೋಕ ಚಕ್ರವನ್ನು ಬಟ್ಟೆಯ ಎರಡೂ ಬದಿಗಳಲ್ಲಿ ಸರಿಯಾಗಿ ಹೊಂದಾಣಿಕೆಯಾಗುವಂತೆ ಮುದ್ರಿಸಬೇಕು.


ಇಲ್ಲಿಂದ ರವಾನೆಯಾಗುವ ಪ್ರತಿಯೊಂದು ಧ್ವಜವನ್ನು ಬಿಐಎಸ್‌ ಪರಿಶೀಲಿಸುತ್ತದೆ ಮತ್ತು ಸಣ್ಣದೊಂದು ತಪ್ಪು ಜರುಗಿದ್ದರೆ ಅದು ಸಂಪೂರ್ಣವಾಗಿ ತಿರಸ್ಕರಿಸಲ್ಪಡುತ್ತದೆ. ಉತ್ತಮ ಗುಣಮಟ್ಟವನ್ನು ನಿರ್ದಿಷ್ಟವಾಗಿ ಕಾಯ್ದು ಕೊಳ್ಳುತ್ತಿದ್ದರು, ವರ್ಷಕ್ಕೆ ಶೇ 10 ರಷ್ಟು ಭಾವುಟಗಳನ್ನು ರದ್ದುಗೊಳಿಸಲಾಗುತ್ತಿದೆ.


ಧ್ವಜಗಳು ಒಂಬತ್ತು ಗಾತ್ರಗಳಲ್ಲಿ ತಯಾರಿಸಲ್ಪಡುತ್ತವೆ. 6×4 ಇಂಚಿನದು ಚಿಕ್ಕದಾದರೆ, 21X14 ಅಡಿಯದ್ದು ದೊಡ್ಡದಾದುದಾಗಿದೆ.


ಈ ಕಟ್ಟುನಿಟ್ಟಾದ ಮಾನದಂಡಗಳಿಂದಾಗಿ, ಹಳೆ ಉದ್ಯೋಗಿಗಳೆ ಇಲ್ಲಿರುತ್ತಾರೆ. ಕೆಕೆಜಿಎಸ್‌ಎಸ್‌ನಲ್ಲಿ ಧ್ವಜವನ್ನು ತಯಾರಿಸುವುದು ಕೇವಲ ಜೀವನೋಪಾಯದ ವಿಧಾನವೊಂದೇ ಆಗಿರದೆ, ಈ ಮೂಲಕ ರಾಷ್ಟ್ರದ ಸೇವೆ ಮಾಡುವ ವಿಧಾನವೂ ಆಗಿದೆ. ಇದಕ್ಕಾಗಿ ಅಲ್ಲಿ ಕಾರ್ಯ ನಿರ್ವಹಿಸುವವರು ಹೆಮ್ಮೆ ಪಡುತ್ತಿದ್ದು, ಅದನ್ನು ತಮ್ಮ ಜೀವನದುದ್ದಕ್ಕೂ ಮುಂದುವರೆಸಲು ಬಯಸುತ್ತಾರೆ.


"ಕೋಟೆಗಳು, ಕಚೇರಿಗಳು, ಮೈದಾನಗಳಲ್ಲಿ, ಅಂತರರಾಷ್ಟ್ರೀಯ ವೇದಿಕೆಗಳ ಮೇಲೆ ನೀವು ನೋಡುವ ಎಲ್ಲಾ ಧ್ವಜಗಳನ್ನು ಇಲ್ಲಿಯೇ ತಯಾರಿಸಲಾಗುತ್ತದೆ. ನಾವು ಅದನ್ನು ತಯಾರಿಸುತ್ತೇವೆ," ಎಂದು ಅಲ್ಲಿ ಕಾರ್ಯ ನಿರ್ವಹಿಸುವ ಹೆಣ್ಣು‌ ಮಕ್ಕಳೊಬ್ಬರು ಹೆಮ್ಮೆಯಿಂದ ಹೇಳುತ್ತಾಳೆ.


"ಕೆಕೆಜಿಎಸ್‌ಎಸ್‌ನಲ್ಲಿ ಕಾರ್ಯ ನಿರ್ವಹಿಸುವವರು ಬೇರೆ-ಬೇರೆ ಧರ್ಮಗಳಿಗೆ ಸೇರಿದವರು. ಆದರೆ ಒಮ್ಮೆ ಈ ಆವರಣದೊಳಗಿದ್ದರೆ, ನಮ್ಮೆಲ್ಲರ ಚಿತ್ತ ಕೇವಲ ರಾಷ್ಟ್ರೀಯ ಧ್ವಜವನ್ನು ತಯಾರಿಸುವುದರತ್ತ. ನಮ್ಮ ಜಾತಿ, ಧರ್ಮದ ವ್ಯತ್ಯಾಸದಂತಹ ನಿರರ್ಥಕ ಆಲೋಚನೆಗಳಿಗೆ ಸಮಯವಿಲ್ಲ. ನಾವು ಒಗ್ಗಟ್ಟಿನಿಂದ ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುವ ಅಗತ್ಯವಿದೆ," ಎಂದು ಅವರು ಹೇಳುತ್ತಾರೆ.


ಇಂದು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಧ್ವಜಗಳನ್ನು ಬಳಸಿ ಬಿಸಾಡಲಾಗುತ್ತಿದೆ. ಇದರಿಂದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದಂತಾಗುತ್ತದೆ. ಇನ್ನಾದರೂ ಜನತೆ ಇದರ ಕುರಿತಾಗಿ ಅರಿತು ಈ ಖಾದಿ ಘಟಕದಲ್ಲಿ ತಯಾರಿಸಿರುವಂತಹ ಧ್ವಜಗಳನ್ನು ಬಳಸುವಂತಾಗಬೇಕು. ಕೆಂಪು ಕೋಟೆಯ ಮೇಲೆ ಧ್ವಜ ಏರಿ ಏರಿ ಹಾರುತಿರಲಿ.