Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಒಂದು ರೂಪಾಯಿನಲ್ಲಿ ಅಡಗಿದೆ ನಿಮ್ಮ ಆರೋಗ್ಯದ ರಹಸ್ಯ- ಸಿಂಪಲ್​ ಆಗಿದೆ ತರಕಾರಿಯಲ್ಲಿ ವಿಷ ಪರೀಕ್ಷೆ ಮಾಡುವ ಯಂತ್ರ

ಟೀಮ್​ ವೈ.ಎಸ್​. ಕನ್ನಡ

ಒಂದು ರೂಪಾಯಿನಲ್ಲಿ ಅಡಗಿದೆ ನಿಮ್ಮ ಆರೋಗ್ಯದ ರಹಸ್ಯ- ಸಿಂಪಲ್​ ಆಗಿದೆ ತರಕಾರಿಯಲ್ಲಿ ವಿಷ ಪರೀಕ್ಷೆ ಮಾಡುವ ಯಂತ್ರ

Wednesday June 07, 2017 , 3 min Read

ಒಂದು ರೂಪಾಯಿಗೇನು ಬೆಲೆ ಅನ್ನುವುದು ನಿಮ್ಮ ಪ್ರಶ್ನೆ. ಆದ್ರೆ ನಾವು ಹೇಳ್ತೀವಿ, ಒಂದು ರೂಪಾಯಿಗೂ ಅದರದ್ದೇ ಆದ ಬೆಲೆ ಇದೆ. ಯಸ್​ ಸುತ್ತಿಬಳಸಿ ಮಾತನಾಡಿದರೆ ಅರ್ಥವಾಗುವುದಿಲ್ಲ. ಅದಕ್ಕೇ ನೇರವಾಗಿ ಹೇಳ್ತಾ ಇದ್ದೀವಿ, ಒಂದು ರೂಪಾಯಿ ಆರೋಗ್ಯವನ್ನು ಕಾಪಾಡಲು ನೆರವು ನೀಡಲಿದೆ. ನೀವು ತಿನ್ನುವ ತರಕಾರಿಗಳಲ್ಲಿ ವಿಷ ಪದಾರ್ಥ ಇದೆಯೋ ಇಲ್ಲವೋ ಅನ್ನುವುದನ್ನು ತೋರಿಸಿಕೊಡಲಿದೆ.

ಹೌದು, ಇವತ್ತು ಶುದ್ಧವಾದ ಆಹಾರ ಸಿಗುವುದೇ ಕಷ್ಟದ ಮಾತು. ವಿಷಕಾರಿ ಅಥವಾ ರಾಸಾಯನಿಕ ಅಂಶಗಳಿಲ್ಲದ ತರಕಾರಿಗಳನ್ನು ಪಡೆದುಕೊಳ್ಳುವುದೇ ಕಷ್ಟವಾಗಿದೆ. ಮಾರುಕಟ್ಟೆಗೆ ಬರುವ ತರಕಾರಿಗಳು ವಿಷ ಅಥವಾ ರಾಸಾಯನಿಕ ವಸ್ತುಗಳಿಂದ ಮುಕ್ತವಾಗಿವೆಯೇ? ಇದನ್ನು ಪರೀಕ್ಷೆ ಮಾಡುವುದು ಹೇಗೆ ಎಂಬ ಯೋಚನೆ ನಿಮ್ಮದಾಗಿದ್ದರೆ, ಬೆಂಗಳೂರಿನ ವಿಜ್ಞಾನಿಗಳು ಕೇವಲ ಒಂದೇ ನಿಮಿಷದಲ್ಲಿ ತರಕಾರಿಯಲ್ಲಿರುವ ವಿಷ ಪರೀಕ್ಷೆ ಮಾಡುವ ಯಂತ್ರವೊಂದನ್ನು ಅಭಿವೃದ್ಧಿಗೊಳಿಸಿದ್ದಾರೆ. ಇದರ ಬೆಲೆ ಕೇವಲ 1 ರೂಪಾಯಿ..!

image


ನಾವು ಖರೀದಿಸುವ ತರಕಾರಿ ಮತ್ತು ಹಣ್ಣುಗಳು ರಾಸಾಯನಿಕ ವಸ್ತುಗಳಿಂದ ಸಂಪೂರ್ಣ ಮುಕ್ತವಾಗಿವೆ ಎಂದು ಹೇಳುವ ಯಾವುದೇ ವ್ಯವಸ್ಥೆ ನಮ್ಮಲ್ಲಿಲ್ಲ. ಇವುಗಳನ್ನು ಬೆಳೆಸುವಾಗ ರೈತರು ವಿವಿಧ ರೀತಿಯ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು ಮತ್ತು ಇನ್ನಿತರ ವಿಷ ವಸ್ತುಗಳನ್ನು ಹಾಕಿರುತ್ತಾರೆ. ಆ ತರಕಾರಿ ಮತ್ತು ಹಣ್ಣುಗಳನ್ನು ತಿನ್ನುವ ಮೂಲಕ ಆ ವಿಷ ವಸ್ತುಗಳು ನೇರವಾಗಿ ನಮ್ಮ ದೇಹದೊಳಗೆ ಸೇರುತ್ತವೆ. ಹಾಗಾದರೆ ತರಕಾರಿಯಲ್ಲಿರುವ ವಿಷವನ್ನು ಪರೀಕ್ಷೆ ಮಾಡುವುದು ಹೇಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದರೆ ಬೆಂಗಳೂರಿನ ಕೆಲವು ವಿಜ್ಞಾನಿಗಳು ನಿಮ್ಮ ನೆರವಿಗೆ ಬಂದಿದ್ದಾರೆ. ಕಡಿಮೆ ವೆಚ್ಚದ ತಂತ್ರಜ್ಞಾನವೊಂದನ್ನು ಕಂಡು ಹಿಡಿದಿರುವ ಅವರು ಇದರ ಮೂಲಕ ಗ್ರಾಹಕರು ತರಕಾರಿ ಮತ್ತು ಹಣ್ಣುಗಳಲ್ಲಿರುವ ವಿಷಕಾರಿ ಅಂಶಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುವಂತೆ ಮಾಡಿದ್ದಾರೆ.

ಇದನ್ನು ಓದಿ: ಪ್ಲಾಸ್ಟಿಕ್​ ಮರುಬಳಕೆಗೆ ಮತ್ತೊಂದು ಪ್ರಯತ್ನ- ಡಿಸೇಲ್​ ತಯಾರಿಗೆ ಅನ್ವೇಷಣೆ

ಸುಲಭ ತಂತ್ರಜ್ಞಾನ

ಪಾಕೆಟ್ ತಂತ್ರಜ್ಞಾನವನ್ನು ಬಳಸಿ ಮಾಡಿರುವ ಈ ಉಪಕರಣವು ಕೆಲವೇ ಕೆಲವು ಕ್ಷಣಗಳಲ್ಲಿ ತರಕಾರಿ ಮತ್ತು ಹಣ್ಣುಗಳಲ್ಲಿ ವಿಷಕಾರಿ ವಸ್ತುಗಳಿವೆಯೇ ಎಂದು ಪರೀಕ್ಷೆ ಮಾಡುತ್ತದೆ. ಮುಖ್ಯವಾಗಿ ರೈತರು ಹೆಚ್ಚು ಬಳಸುವ ಪ್ಯಾರಾಕ್ವೆಟ್ ಡಿಕ್ಲೊರೈಡ್ ಎಂಬ ವಿಷಕಾರಿ ವಸ್ತುವನ್ನು ಪತ್ತೆ ಮಾಡುವಲ್ಲಿ ಈ ಉಪಕರಣ ನಿಪುಣವಾಗಿದೆ. ಹಣ್ಣು, ತರಕಾರಿ ಮಾತ್ರವಲ್ಲ ಮನುಷ್ಯರಲ್ಲಿಯೂ ಈ ವಿಷಕಾರಿ ಅಂಶ ಸೇರಿವೆಯೇ ಎಂಬುದನ್ನೂ ಈ ಉಪಕರಣ ಪರೀಕ್ಷೆ ಮಾಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ವ್ಯಕ್ತಿಯ ಮೂತ್ರದ ನಮೂನೆಯನ್ನು ಪರೀಕ್ಷೆ ಮಾಡುವ ಮೂಲಕ ಇದನ್ನು ಕಂಡು ಹಿಡಿಯಬಹುದು.

image


ಪ್ಯಾರಾಕ್ವೆಟ್ ಡಿಕ್ಲೊರೈಡ್

ಜಗತ್ತಿನಾದ್ಯಂತವಿರುವ ಬಹುತೇಕ ರೈತರು ತಮ್ಮ ಬೆಳೆಯನ್ನು ಪರಾವಲಂಬಿ ಜೀವಿಗಳು ಮತ್ತು ಕಳೆಯಿಂದ ರಕ್ಷಿಸಲು ಪ್ಯಾರಾಕ್ವೆಟ್ ಡಿಕ್ಲೊರೈಡ ಅನ್ನುವ ರಾಸಾಯನಿಕ ಕೀಟನಾಶಕವನ್ನು ಹೆಚ್ಚು ಬಳಸುತ್ತಾರೆ. ಕಳೆಯ ಬೆಳವಣಿಗೆಯನ್ನು ತಡೆಯಲು ಇದನ್ನು ಮಣ್ಣಿಗೆ ಸಿಂಪಡಿಸಲಾಗುತ್ತದೆ. ಇಂಥ ಮಣ್ಣಿನಲ್ಲಿ ಬೆಳೆದ ತರಕಾರಿ ಮತ್ತು ಹಣ್ಣುಗಳನ್ನೇ ಜನರು ಸೇವಿಸುತ್ತಾರೆ. ಪ್ಯಾರಾಕ್ವೆಟ್ ಡಿಕ್ಲೊರೈಡ್ ಅತ್ಯಂತ ವಿಷಕಾರಿ ರಾಸಾಯನಿಕ ವಸ್ತುವಾಗಿದ್ದು ಇದು ಮನುಷ್ಯರಲ್ಲಿ ಶ್ವಾಸಕೋಶ ಸಂಬಂಧಿ ಕಾಯಿಲೆ, ಪರ್ಕಿನ್ಸನ್ ಕಾಯಿಲೆ ಉಂಟು ಮಾಡುತ್ತದೆ. ಮಿದುಳಿನಲ್ಲಿರುವ ನರಗಳ ಮೇಲೆ ಪರಿಣಾಮ ಬೀರುವ ಇದು ಸ್ನಾಯುಗಳಲ್ಲಿ ಬಿಗಿತ, ನಡುಕ, ಧ್ವನಿಯಲ್ಲಿ ಬದಲಾವಣೆ ಇತ್ಯಾದಿಗಳನ್ನು ಉಂಟು ಮಾಡುತ್ತದೆ. ಶೇಕಡಾ 70 ರಷ್ಟು ರೈತರ ಮರಣವು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಈ ವಿಷಕಾರಿ ವಸ್ತುವಿನಿಂದ ಉಂಟಾಗುತ್ತಿದೆ ಎಂದು ಹೇಳಲಾಗುತ್ತಿದೆ.

 " ತರಕಾರಿ ಮತ್ತು ಹಣ್ಣುಗಳಲ್ಲಿರುವ ವಿಷ ವಸ್ತುವನ್ನು ಪತ್ತೆ ಮಾಡುವ ಸಮರ್ಥ ತಂತ್ರಜ್ಞಾನಗಳು ಈಗಾಗಲೇ ಸಾಕಷ್ಟಿವೆ. ಆದರೆ ಅವೆಲ್ಲವೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ತುಂಬಾ ದುಬಾರಿಯಾಗಿವೆ. ಇದು ಸಾಮಾನ್ಯ ಬಳಕೆಗೆ ಅಸಾಧ್ಯ."
- ಡಾ. ದೀಪಾ ಭಗತ್, ಎನ್​ಬಿಎಐಆರ್ ನ ಹಿರಿಯ ವಿಜ್ಞಾನಿ

ಬೆಲೆ ಕಡಿಮೆ

ಬೆಂಗಳೂರಿನ ವಿಜ್ಞಾನಿಗಳು ಅಭಿವೃದ್ಧಿಗೊಳಿಸಿರುವ ಈ ತಂತ್ರಜ್ಞಾನವು ಪಾಕೆಟ್ ರೂಪದಲ್ಲಿದ್ದು, ಇದರಲ್ಲಿ ಲಿಟ್ಮಸ್ ಪೇಪರ್ ಪಟ್ಟಿಗಳಂತೆ ಕಾಣುವ 20 ನ್ಯಾನೊ ಸೆನ್ಸರ್ಸ್ ಸ್ಪ್ರಿಂಕ್ಲ್ಡ್ ಪೇಪರ್ ಪಟ್ಟಿಗಳಿರುತ್ತವೆ. ಈ ಪ್ಯಾಕೆಟ್​​ ಬೆಲೆ ಕೇವಲ ಒಂದು ರೂಪಾಯಿ. ಪ್ರತಿ ಪಟ್ಟಿಯನ್ನು ಒಮ್ಮೆ ಉಪಯೋಗಿಸಿದ ಬಳಿಕ ಉಪ್ಪು ನೀರಿನಲ್ಲಿ ತೊಳೆದಿಟ್ಟರೆ ಮತ್ತೆ ಅನೇಕ ಬಾರಿ ಉಪಯೋಗಿಸಬಹುದು. ಸದ್ಯಕ್ಕೆ ಈ ತಂತ್ರಜ್ಞಾನವನ್ನು ರೈತರು ಬೆಳೆಯುವ ಬೆಳೆಗಳಲ್ಲಿ ಪ್ಯಾರಾಕ್ವೆಟ್ ಡಿಕ್ಲೊರೈಡ್ ಅಂಶ ಸೇರಿವೆಯೇ ಎಂಬುದನ್ನು ಪತ್ತೆ ಹಚ್ಚಲು ಬಳಸಿಕೊಳ್ಳಲಾಗುತ್ತಿದೆ.

image


ಗ್ರಾಹಕ ಸ್ನೇಹಿ

ಈ ಹೊಸ ತಂತ್ರಜ್ಞಾನದ ಮೂಲಕ ಗ್ರಾಹಕರು ತಾವೇ ಪ್ರತ್ಯಕ್ಷವಾಗಿ ತರಕಾರಿ ಮತ್ತು ಹಣ್ಣುಗಳಲ್ಲಿ ವಿಷಕಾರಿ ವಸ್ತುಗಳು ಇವೆಯೇ ಎಂಬುದನ್ನು ಪರೀಕ್ಷೆ ಮಾಡಿ ನೋಡಬಹುದು. ತರಕಾರಿ ಅಥವಾ ಹಣ್ಣಿನ ಸಣ್ಣ ತುಂಡೊಂದನ್ನು ಸೆನ್ಸರ್ ಪಟ್ಟಿಯ ಮೇಲೆ ಇಟ್ಟು ಅದನ್ನು ಕೈಯಲ್ಲಿ ಹಿಡಿಯುವ ಅಲ್ಟ್ರಾ ವೈಲೆಟ್ (ಯುವಿ) ಲ್ಯಾಂಪ್​​ನಡಿ ಇಡಬೇಕು. ಆ ತರಕಾರಿಯಲ್ಲಿ ವಿಷ ವಸ್ತು ಇದ್ದರೆ ಯು.ವಿ. ದೀಪದ ಅಡಿಯಲ್ಲಿರುವ ಪಟ್ಟಿಯ ಫ್ಲೋರೊಸೆನ್ಸ್ ಬೆಳಕು ಆರಿ ಹೋಗುತ್ತದೆ. ಆರಿ ಹೋಗದಿದ್ದರೆ ಆ ತರಕಾರಿಯಲ್ಲಿ ವಿಷ ಇಲ್ಲವೆಂದು ಅರ್ಥ. ಈ ಪರೀಕ್ಷೆ ಮಾಡಲು ತರಬೇತಿ ಪಡೆದ ಸಿಬ್ಬಂದಿ ಅಥವಾ ನಿಯಮಿತ ವಿದ್ಯುತ್ ಪೂರೈಕೆಯ ಅಗತ್ಯವಿಲ್ಲ. ಇದನ್ನು ಗ್ರಾಮೀಣ ಪ್ರದೇಶಗಳಲ್ಲೂ ಬಳಸಬಹುದು ಮತ್ತು ರಾಸಾಯನ ಶಾಸ್ತ್ರದ ಬಗ್ಗೆ ಸ್ವಲ್ಪವೇ ಜ್ಞಾನವಿರುವ ಜನರು ಕೂಡಾ ಇದನ್ನು ಸುಲಭವಾಗಿ ನಿರ್ವಹಣೆ ಮಾಡಬಹುದು.

ಟೀಮ್ ವರ್ಕ್

ನ್ಯಾನೊ ಪಾಕೆಟ್​​ನಲ್ಲಿರುವ ಬಣ್ಣದ ಸೆನ್ಸರ್ ಪಟ್ಟಿಗಳನ್ನು ಯುವಿ ಲ್ಯಾಂಪ್​ಗಳು ಸಣ್ಣ ಗಾತ್ರದ್ದಾಗಿದ್ದು ಇದನ್ನು ರೈತರು ಮತ್ತು ಗ್ರಾಹಕರು ಬೇಕೆಂದಾಗ ಯಾವುದೇ ಉಪಕರಣಗಳ ನೆರವಿಲ್ಲದೆ ಕೊಂಡೊಯ್ಯಲು ಸಾಧ್ಯವಿದೆ. ಕೊಲ್ಕತ್ತಾದಲ್ಲಿರುವ ಇಂಡಿಯನ್ ಅಸೋಸಿಯೇಷನ್ ಫಾರ್ ದಿ ಕಲ್ಟಿವೇಷನ್ ಆಫ್ ಸೈನ್ಸ್ ನ(ಐಎಸಿಎಸ್) ನಿರ್ದೇಶಕ ಮತ್ತು ಹಿರಿಯ ವಿಜ್ಞಾನಿ ಪ್ರೊಫೆಸರ್ ಶಂತನು ಭಟ್ಟಾಚಾರ್ಯ ಮತ್ತು ಅವರ ತಂಡ, ಐಐಎಸ್​ಸಿ ಮತ್ತು ಎನ್​ಬಿಎಐಆರ್ ಜಂಟಿಯಾಗಿ ಈ ಕಡಿಮೆ ಬೆಲೆಯ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಿವೆ.

ಇದನ್ನು ಓದಿ:

1. ಡಿಸೈನರ್ "ಬೋಟಿಕ್ " ! ಮಹಿತಾ ಪ್ರಸಾದ್ ಡಿಸೈನ್ಸ್

2. "ಗ್ರೀನ್ ಕಾರ್ಪೆಟ್" ಹಾಸಿತು ಆಧುನಿಕ ಪಾಟ್ ಬ್ಯುಸಿನೆಸ್

3. ಸ್ಟಾರ್ಟ್ಅಪ್ ಲೋಕದಲ್ಲಿ ಹೊಸ ಪ್ರಯೋಗ- ಸದ್ದು ಮಾಡುತ್ತಿದೆ ನಿಕಿತಾ ಲಲ್ವಾನಿಯ ಸೈಕಲ್ ಸಿಟಿ